ಮೆಕಾರ್ಥಿ, ಜೋಸೆಫ್ ರೇಮಾಂಡ್

	1908-57. ಅಮೆರಿಕ ಸಂಯುಕ್ತ ಸಂಸ್ಥಾನದ ಒಬ್ಬ ಪ್ರಭಾವಶಾಲಿ ರಾಜಕಾರಣಿ. ಅಪೆಲ್ಟನ್ ಬಳಿಯ ಗ್ರಾಮದಲ್ಲಿ 1908 ನವೆಂಬರ್ 14ರಂದು ಜನಿಸಿದ. ತನ್ನ ತಂದೆಗೆ ಬೇಸಾಯದಲ್ಲಿ ಸಹಾಯ ಮಾಡುವ ಸಲುವಾಗಿ 18 ವರ್ಷ ವಯಸ್ಸಿನಲ್ಲಿಯೇ ವಿದ್ಯಾರ್ಥಿಜೀವನ ಬಿಟ್ಟರೂ ಮುಂದೆ 1929ರ ಹೊತ್ತಿಗೆ ಕಿರಾಣಿ ಅಂಗಡಿಯೊಂದರಲ್ಲಿ ಹಗಲು ಕೆಲಸಮಾಡುತ್ತ ರಾತ್ರಿ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ 1935ರ ಹೊತ್ತಿಗೆ ಮಾರ್ಕೆಟ್ ವಿಶ್ವವಿದ್ಯಾಲಯದ ಪದವಿಯ ಜೊತೆಗೆ ಎಲ್‍ಎಲ್.ಬಿ ಪದವಿಯನ್ನು ಪಡೆದು ವಾಪಕ ಮತ್ತು ಶಾನೋ ನಗರಗಳಲ್ಲಿ ನಾಲ್ಕು ವರ್ಷಗಳ ಕಾಲ ವಕೀಲಿವೃತ್ತಿ ಕೈಗೊಂಡು ಮುಂದೆ ಸಂಚಾರಿನ್ಯಾಯಾಲಯದ ನ್ಯಾಯಾಧೀಶನಾದ. 

	ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಹಂಬಲದಿಂದ ನೌಕಾದಳಕ್ಕೆ ಸಾಮಾನ್ಯ ಸಿಪಾಯಿಯಾಗಿ ಸೇರಿ ಮುಂದೆ ಕ್ಯಾಪ್ಟನ್ ಆಗಿ ನಿವೃತ್ತಿಹೊಂದಿದ. ನೌಕಾದಳದಲ್ಲಿ ಹಾಗೂ ವಾಯುದಳದಲ್ಲಿ ಸಲ್ಲಿಸಿದ ಸೇವೆಗಾಗಿ ಈತನನ್ನು ಗೌರವಿಸಿ ಪದಕ ನೀಡಲಾಯಿತು. ಯುದ್ಧಭೂಮಿಯಿಂದ ವಿಸ್ಕಾನ್‍ಸಿನ್ ನಗರಕ್ಕೆ ವಾಪಸಾಗಿ ಮತ್ತೆ ಸಂಚಾರಿನ್ಯಾಯಾಲಯದ ನ್ಯಾಯಾಧೀಶನಾಗಿ ಪುನರ್‍ಆಯ್ಕೆಗೊಂಡ. 1946ರಲ್ಲಿ ಸೆನೆಟ್‍ಗೆ ನಡೆದ ಚುನವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತನಾದ. ಹೀಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ ಮುಂದೆ 1950 ಫೆಬ್ರವರಿ 9ರಂದು ವೀಲಿಂಗ್ ಪಟ್ಟಣದಲ್ಲಿ ಮಾಡಿದ ಭಾಷಣದ ಮೂಲಕ ರಾಷ್ಟ್ರದ ಗಮನವನ್ನು ತನ್ನತ್ತ ಸೆಳೆದ. ಆರಂಭದಿಂದಲೂ ಸಮತಾವಾದದ ಕಮ್ಯೂನಿಸಂ ಬಗ್ಗೆ ಕಹಿ ಭಾವನೆಯನ್ನು ಹೊಂದಿದ್ದ ಈತ ಸಮತಾವಾದದವರೊಡನೆ ನಿಕಟವಾಗಿ ಶಾಮಿಲಾಗಿರುವ ದೇಶದ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳಲ್ಲಿಯ ಉನ್ನತಾಧಿಕಾರಿಗಳ ಪಟ್ಟಿಯೊಂದು ತನ್ನ ಬಳಿ ಇದೆ ಎಂದು ಪ್ರಕಟಿಸುವುದರ ಮೂಲಕ ಎಲ್ಲರ ಗಮನ ಸೆಳೆದ.

	ಈತನ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಅದನ್ನು ಪರಿಶೀಲಿಸಲು ಮತ್ತು ನಿಜವನ್ನು ಪತ್ತೆ ಹಚ್ಚುವ ಸಲುವಾಗಿ ಮೇರಿಲ್ಯಾಂಡ್ ಪ್ರಾಂತ್ಯದ ಡೆಮಕ್ರಟಿಕ್ ಪಕ್ಷದ ಸೆನೆಟರ್ ಮಿಲ್ಲರ್ಡ್ ಇ ಟೈಡಿಂಗ್ ಅವನ ನೇತೃತ್ವದಲ್ಲಿ ಒಂದು ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು. ಆದರೆ ಮೆಕಾರ್ಥಿ ಆ ಸಮಿತಿಯ ಮುಂದೆ ತನ್ನ ಹೇಳಿಕೆಗಳನ್ನು ಸಾಕ್ಷ್ಯಾಧಾರಗಳ ಮೂಲಕ ಸಮರ್ಥಿಸಿಕೊಳ್ಳಲಾರದೆ ಹೋದ. ಆ ಸಮಿತಿಯಲ್ಲಿದ್ದ ಡೆಮಾಕ್ರಟಿಕ್ ಮತ್ತು ಲಿಬರಲ್ ಪಬ್ಲಿಕನ್ ಗುಂಪಿನ ಸದಸಯರು ಆತನ ಹೇಳಿಕೆ ಹಗೂ ಸಾಕ್ಷ್ಯಗಳನ್ನು ಸುಳ್ಳು ಮತ್ತು ಕುಟಿಲ ತಂತ್ರಗಳಿಂದ ಕೂಡಿದ್ದೆಂದೂ ಬಲಪಂಥೀಯ ರಿಪಬ್ಲಿಕನ್ ಸದಸ್ಯರು ಕಲ್ಪನಾ ಪೂರಿತ ಹಾಗೂ ನಂಬಲು ಅನರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸುವುದರ ಮೂಲಕ ಮೆಕಾರ್ಥಿಯ ಹೇಳಿಕೆಗಳನ್ನು ತಿರಸ್ಕರಿಸಿ ತೀರ್ಪು ನೀಡಿತು.

	1950 ನವೆಂಬರ್ ತಿಂಗಳಲ್ಲಿ ಸೆನೆಟ್ಟಿಗೆ ನಡೆದ ಚುನಾವಣೆಯಲ್ಲಿ ಟೈಡಿಂಗ್‍ರವರು ಸೋಲಲು ಮೆಕಾರ್ಥಿಯೇ ಕಾರಣವೆಂಬುದಕ್ಕಾಗಿ ಮತ್ತೊಂದು ಪೀಠ ವಿಚಾರಣೆ ನಡೆಸಿದರೆ ಇನ್ನೊಂದು ಚುನಾವಣೆ ಆತನ ಹಣಕಾಸಿನ ವಹಿವಾಹಿಟಿನ ಬಗ್ಗೆ ಹುಯಿಲೆಬ್ಬಿಸಿತು. ಮೇಕಾರ್ಥಿ ತನ್ನನ್ನು ಟೀಕಿಸಿದವರನ್ನು, ಖಂಡಿಸಿದವರನ್ನು ಅಮೆರಿಕದ ದ್ರೋಹಿಗಳೇಂದೂ ಮೂರ್ಖರೆಂದೂ ಹೀಯಾಳಿಸಿ ಅಂತವರೆಲ್ಲ ಕಮ್ಯೂನಿಸ್ಟರು ಅಥವಾ ಕಮ್ಯೂನಿಸ್ಟ್ ಏಜೆಂಟರು ಎಂದು ಕಟುವಾಗಿ ಟೀಕಿಸಿದ. ಆಗಿನ ವಿದೇಶಾಂಗ ಇಲಾಖಾ ಕಾರ್ಯದರ್ಶಿ ಹಾಗೂ ಸೈಕಿಕ ದಳದ ಜನರಲ್‍ಗಳೂ ಟೀಕಿಗೆ ಗುರಿಯಾದರು. 1952ರಲ್ಲಿ ಐಸೆನ್‍ಹೋವರ್ ಅವರ ಬೆಂಬಲ ಪಡೆದು ಸೆನೆಟ್ಟಿಗೆ ಮರು ಆಯ್ಕೆಯಾದ. ಆದರೆ ಚುನಾಯಿತನಾದ ಕೆಲವೇ ದಿನಗಳಲ್ಲಿ ಐಸೆನ್‍ಹೋವರ್ ಅವರನ್ನು ಹಲವಾರು ವಿಷಯಗಳಲ್ಲಿ ವಿರೋಧಿಸಲಾರಂಭಿಸಿದ. ದೀರ್ಘಕಾಲ ದೇಶವಾಳಿದ ರೂಸ್‍ವೆಲ್ಟ್ ಮತ್ತು ಟ್ರೂಮನ್‍ರ ಆಡಳಿತವನ್ನೂ ಐಸೆನ್‍ಹೋವರ್	ಆಡಳಿತವನ್ನೂ ಕಟುವಾಗಿ ಈತ ಟೀಕಿಸುತ್ತಿದ್ದ.

	1953ರಲ್ಲಿ ಸೆನೆಟ್ಟಿನ ತನಿಖಾ ಸಮಿತಿಯ ಅಧ್ಯಕ್ಷನಾಗಿ ವಾಯ್ಸ್ ಆಫ್ ಅಮೆರಿಕ ಮತ್ತು ನ್ಯೂಜರ್ಸಿಯ ಪೋರ್ಟ್‍ಮ್ಯಾಮೂತ್‍ನಲ್ಲಯ ಮಿಲಿಟರಿ ನೆಲೆಗಳೂ ಸೇರಿದಂತೆ 157 ವಿವಿಧ ವಿಚಾರಗಳನ್ನು ನಡೆಸಿದ. ಆದರೂ ಯಾವುದೇ ವಿಷಯದಲ್ಲಿ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಅವುಗಳನ್ನು ಸಾಬೀತು ಮಾಡಲಾರದೆ ಹೋದ. ವಿಚಾರಣಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ವಿಧಾನದಿಂದ ಈತನ ಮತ್ತು ಸೈನ್ಯದ ನಡುವೆ ಅತಿ ದೊಡ್ಡ ಬಿರುಕು ಉಂಟಾಯಿತು. 1954ರ ಏಪ್ರಿಲ್‍ನಿಂದ ಜೂನ್ 17ರ ತನಕ ಆತ ನಡೆಸಿದ ವಿಚಾರಗಳು ದೇಶಾದ್ಯಂತ ರೇಡಿಯೋ ಮೂಲಕ ಪ್ರಸಾರ ಪಡೆಯಿತಾದರೂ ವಿಚಾರಣೆಯಿಂದ ಯಾವುದೇ ಸತ್ಯ ಹೊರಬರದೆ ಅರ್ಧದಲ್ಲಿಯೇ ಮೊಟಕಾಯಿತು. ಇವೆಲ್ಲದರ ದೆಶೆಯಿಂದ ಮೆಕಾರ್ಥಿಯ ವಿರುದ್ಧವಾಗಿಯೇ ಸೆನೆಟ್ ಶಿಸ್ತಿನ ಕ್ರಮದ ವಿಚಾರಣೆಯನ್ನು ಕೈಗೊಳ್ಳಬೇಕಾಯಿತು. ಈ ಉದ್ದೇಶಕ್ಕಾಗಿಯೇ ರಿಪಿಬ್ಲಿಕ್ ಪಕ್ಷದ ವತಿಯಿಂದ ಸೆನೆಟರ್ ಆಗಿದ್ದ ಆರ್ಥರ ವಿ ವಾಟಿಕನ್ ನೇತೃತ್ವದಲ್ಲಿ ವಿಚಾರಣಾ ಸಮಿತಿ ಅಸ್ತಿತ್ವಕ್ಕೆ ಬಂತು. ಆ ಸಮಿತಿ ಈತನ ವಿರುದ್ಧ ಈತನ ಸಹೋದ್ಯೋಗಿಗಳೇ ಹೊರಿಸಿದ್ದ 46 ವಿವಿಧ ಆಪಾದನೆಗಳನ್ನು ವಿಚಾರಣೆ ನಡೆಸಿತು. ಮುಂದೆ 1954 ಡಿಸೆಂಬರ್ 2ರಂದು ಸೆನೆಟ್ 67-22 ಮತಗಳಿಂದ ತಪ್ಪಿತಸ್ಥನೆಂದು ಘೋಷಿಸಿತು. ಇದರೊಂದಿಗೆ ಈತನ ರಾಜಕೀಯ ಜೀವನ ಕೊನೆಗೊಂಡಿತು. ಮೆಕಾರ್ಥಿ ಮುಂದೆ ಅನಾರೋಗ್ಯ ಪೀಡಿತನಾಗಿ 1957 ಮೇ 2ರಂದು ವಿಧಿವಶನಾದ.

	ಮೆಕಾರ್ಥಿಯ ಕಟ್ಟಾ ಬೆಂಬಲಿಗರು ದೇಶದಲ್ಲಿ ಸಮತಾವಾದ ಸರ್ಕಾರಿ ಇಲಾಖೆಗಳನ್ನು ಪ್ರವೇಶಿಸದಂತೆ, ಕಮ್ಯೂನಿಸಂ ವಿರುದ್ಧ ಹೋರಾಟಗಾರನಾಗಿ ಧರ್ಮ ಯುದ್ಧವನ್ನು ಸಾರಿದವನೆಂದು ಈತನನ್ನು ಪ್ರತಿಪಾದಿಸಿದರೆ ಈತನ ವಿರೋಧಿಗಳು ಪ್ರಜಾತಂತ್ರ ವಿರೋಧಿ ಕ್ರಮಗಳನ್ನು ಅನುಸರಿಸುವುದರ ಮೂಲಕ ಅಮೆರಿಕದ ಘನತೆಯನ್ನು ಹಾಳು ಮಾಡುವನೆಂದೂ ಸರ್ಕಾರಿ ಅಧಿಕಾರಿಗಳಲ್ಲಿ ಭಯ ಮತ್ತು ಅನುಮಾನಗಳನ್ನು ಹುಟ್ಟು ಹಾಕಿ ವಾಸ್ತವವಾಗಿ ಕಮ್ಯೂನಿಸಂ ವಿರುದ್ಧ ಹೋರಾಟದಲ್ಲಿ ಅಡಚಣೆ ಉಂಟು ಮಾಡಿದನೆಂದೂ ವಾದಿಸುತ್ತಾರೆ. ಆತನೊಬ್ಬ ಕಟ್ಟಾ ದೇಶ ಭಕ್ತ. ಅಮೆರಿಕನಿಸಂ ನ ನಿಜವಾದ ಪೋಷಕನೆಂದೂ ಆತ ಅನುಸರಿಸಿದ ಕ್ರಮಗಳಿಗಾಗಿ ದೇಶಾದ್ಯಂತ ಸೃಷ್ಟಿಸಿದ ವಾತಾವರಣಕ್ಕೆ ಮೆಕಾರ್ಥಿಯಿಸಂ ಎಂದೂ ಹೆಸರಾಯಿತು.
												(ಬಿ.ಕೆ.ಸಿ.ಜಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ